ಸುಪ್ರಸಿದ್ಧ ಲೇಖಕಿ ಎಲಿಜೆಬೆತ್ ಗಿಲ್ಬರ್ಟ್’ರ ೨೦೦೬ರಲ್ಲಿ
ಬಿಡುಗಡೆಯಾದ “ಈಟ್-ಪ್ರೇ-ಲವ್” ಪುಸ್ತಕ ಅತ್ಯಂತ ಜನಪ್ರಿಯವಾಗಿತ್ತು. ಜೀವನದಲ್ಲಿ ಪತಿಯಿಂದ
ವಿಚ್ಛೇಧಿತಳಾಗಿ,ನಿರಾಶಳಾಗಿ,ಹತಾಶಳಾಗಿ ತನ್ನ
ಜೀವನದಲ್ಲಿ ಕಳೆದುಹೋದ ಖುಷಿಯನ್ನು ಮರಳಿ ಪಡೆಯಲು ವಿಶ್ವ ಪರ್ಯಟನ ಮಾಡ ಹೊರಟ ಎಲಿಜೆಬೆತ್ ಎಂಬ ಮಹಿಳೆಯೋರ್ವಳ
ಕಾಲ್ಪನಿಕ ಕಥೆ ಇದು. ಎಲಿಜೆಬೆತ್ ಮೊಟ್ಟಮೊದಲು ಇಟಲಿಯತ್ತ ಪ್ರಯಾಣ ಬೆಳೆಸಿ ನಾಲ್ಕು
ತಿಂಗಳುಗಳಕಾಲ ಮೃಷ್ಟಾನ್ನ ಭೋಜನದ ರುಚಿಯನ್ನು ಸವಿಯುತ್ತಾಳೆ, ಅದಕ್ಕೆ
ಪುಸ್ತಕದ ಈ ಭಾಗದ ಹೆಸರು ‘ಈಟ್’. ಎಲಿಜೆಬೆತ್
ತನ್ನ ಪ್ರವಾಸವನ್ನು ಮುಂದುವರೆಸಿ ಭಾರತಕ್ಕೆ ಬಂದಿಳಿದು, ಮೂರು
ತಿಂಗಳುಗಳ ಕಾಲ ಜೀವನದ ಆಧ್ಯಾತ್ಮಿಕ ಮಗ್ಗಲುನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ, ಅದಕ್ಕೆ ಪುಸ್ತಕದ ಈ ಭಾಗದ ಹೆಸರು ‘ಪ್ರೇ’. ಅಂತಿಮವಾಗಿ ಪ್ರೀತಿಯನ್ನು ಅರಿಸಿ ಎಲಿಜೆಬೆತ್ ಇಂಡೋನೆಶೀಯದ ಬಾಲಿಗೆ ತಲುಪಿ ಪ್ರೀತಿ
ಪ್ರೇಮದ ಹಲವು ಆಯಾಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ,
ಅದಕ್ಕೆ ಪುಸ್ತಕದ ಈ ಭಾಗದ ಹೆಸರು ‘ಲವ್’.
ನಮ್ಮ
ಕಥಾನಾಯಕಿಯರ ಬದುಕಿನಲ್ಲಿ ‘ಈಟ್’, ‘ಪ್ರೇ’ ಮತ್ತು ‘ಲವ್’ಗಳ ಅಂಶ ತುಂಬಾ ಗಣನೀಯವಾಗಿದೆ ಅದಕ್ಕೆ ಈ ಪುಸ್ತಕದ ಉಲ್ಲೇಖ. ನಮ್ಮ ದೇಶಕ್ಕೆ
ಸಂಬಧಿಸಿದ ಈ ಮೂವರು ನಾಯಕಿಯರ ವಯಸ್ಸು ೯೭,೯೮ ಮತ್ತು ೧೦೬, ಈ ಮೂವರು ಮಹಿಳೆಯರ ಜೀವನ ಬರೀ ವೃದ್ಧರಿಗಷ್ಟೇ ಅಲ್ಲ ದೇಶದ ಯುವಕರಿಗೂ ಬದುಕಿನ
ಪಾಠವಾಗಬಲ್ಲದು. ‘ಈಟ್-ಪ್ರೇ-ಲವ್’ ಪುಸ್ತಕದ೦ತೆ
ಮೊದಲಿಗೆ ‘ಈಟ್’ ಕುರಿತು, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪುಟ್ಟ ಗ್ರಾಮ ಗುಡ್ಡಿವಾಡಾದ ನಿವಾಸಿ ೧೦೬ ವರ್ಷದ
ಮಸ್ತಾನಮ್ಮಾ ಜಗತ್ತಿನ ಅತ್ಯಂತ ವೃದ್ಧ ಯೂಟ್ಯೂಬರ್ ಆಗಿದ್ದರೆ. ಯೂಟ್ಯೂಬ್’ನಲ್ಲಿಯೇ ಜನರಿಗೆ ಹೊಸ ರುಚಿಯ ತಿಂಡಿ ತಿನಿಸುಗಳ ಕುರಿತು ಅಡುಗೆ ಅರಮನೆಯ ದರ್ಶನ ಮಾಡಿಸುತ್ತಾರೆ. ಯೂಟ್ಯೂಬ್’ನಲ್ಲಿ ಮಸ್ತಾನಮ್ಮಾರ ಹಿಂಬಾಲಕರ ಸಂಖ್ಯೆ ಎಂಟು ಲಕ್ಷಕ್ಕೂ ಅಧಿಕ!! ಇದರಿಂದ ಅವರ
ಅಡುಗೆಯ ಸವಿಯನ್ನು ಅಂದಾಜಿಸಬಹುದು. ಮಸ್ತಾನಮ್ಮಾರ ಪ್ರಶಂಸಕರು ಕೇವಲ ಭಾರತದಲ್ಲಿಯೇ ಅಲ್ಲ
ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಇವರ ಯೂಟ್ಯೂಬ್ ಚಾನಲ್’ನ
ಹೆಸರು ‘ಕಂಟ್ರಿ ಫುಡ್ಸ್’, ಇದರ
ನಿರ್ವಹಣೆಯನ್ನು ಮಸ್ತಾನಮ್ಮರ ಮೊಮ್ಮಗ ಮಾಡುತ್ತಾರೆ. ಕಳೆದ ವರ್ಷ ಮಸ್ತನಮ್ಮಾರ ಮೊದಲ ಸವಿರುಚಿಯ
ವಿಡಿಯೋವನ್ನು ಯೂಟ್ಯೂಬ್’ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಾಲಕ್ರಮೇಣವಾಗಿ
ಇವರ ರಿಸೆಪಿಗಳ ಜನಪ್ರೀಯತೆ ಹೆಚ್ಚಿ ಇವರು ಒಬ್ಬ ಇಂಟರ್ನೆಟ್ ಸೂಪರ್ ಸ್ಟಾರ್ ಆಗಿ ಎಲ್ಲರ
ಅಡುಗೆಮನೆ ಮಾತಾದರು. ಮಸ್ತಾನಮ್ಮಾರ ವಿಶೇಷ ಭಕ್ಷ್ಯಗಳಲ್ಲಿ ಪಾರಂಪರಿಕ ಚಿಕನ್ ಕರಿ,ಬೆಂಡೆಕಾಯಿಯ
ಫ್ರೈ, ವಾಟರ್ ಮೆಲನ್ ಎಗ್ಗ ಬುರ್ಜಿ,ಎಗ್
ದೋಸೆ, ತರಬೂಜ್ ಚಿಕನ್ ಹಾಗೂ ಬೀಟ್’ರೂಟ್’ನ ಭಾಜಿ ಪ್ರಮುಖವಾದವು. ಮಸ್ತಾನಮ್ಮಾರನ್ನು ನೋಡಿ
ವಯಸ್ಸು ಕೇವಲ ಒಂದು ಸಂಖ್ಯೆ ಅಥವಾ ಅಂಕ ಎಂಬುದು ಮತ್ತಷ್ಟು ಧೃಡವಾಗುತ್ತದೆ. ಪ್ರತಿ
ವ್ಯಕ್ತಿಯಲ್ಲಿಯೂ ಏನನ್ನಾದರೂ ಸಾಧಿಸಬೇಕೆಂಬ ಛಲವಿದ್ದಲ್ಲಿ ವಯಸ್ಸು ಎಂದಿಗೂ
ಅಡ್ಡಬರಲಾರದೆಂಬುದಕ್ಕೆ ಜೀವಂತ ಉದಾಹರಣೆ ಮಸ್ತಾನಮ್ಮಾ. ವಯಸ್ಸಾಗಿದೆ ಎಂಬ ನೆಪದಲ್ಲಿ ಕೊರಗಿ ಕೈ
ಚಲ್ಲಿ ಕುಳಿತುಕೊಳ್ಳುವರೆಲ್ಲರೂ
ಮಸ್ತಾನಮ್ಮಾರಿಂದ ಜೀವನೋತ್ಸಾಹದ ಪಾಠ
ಕಲಿಯಬಹುದು.
ಮಸ್ತಾನಮ್ಮಾರ೦ತೆಯೇ ಬದುಕಿನಲ್ಲಿ
ಭಗವಂತನನ್ನು ಕಾಣುವ ೯೭ರ ಇಳಿಪ್ರಾಯದಲ್ಲಿ ಯುವಕ ಯುವತಿಯರನ್ನು
ಮೀರಿಸುವ ಯೋಗಗುರು-ಯೋಗಮಾತೆ ನನ್ನಾಮಲ್! ಯಾವ ವಯಸ್ಸಿನಲ್ಲಿ ಬಹುತೇಕ ಜನ ನಡೆದಾಡಲೂ ಪ್ರಯಾಸ ಪಡುವರೋ ಅಂತಹ
ಮುಪ್ಪಿನ ಪ್ರಾಯದಲ್ಲಿ ಯೋಗದ ಪಾಠಮಾಡುವ ದೇಶದ ಅತ್ಯಂತ ಹಿರಿಯ ಯೋಗ ಶಿಕ್ಷಕಿ ನನ್ನಾಮಲ್. ಯೋಗದ
ಕಠಿಣ ಆಸನಗಳನ್ನು ಕೂಡ ಸರಳವಾಗಿ ಮಾಡುವ ನನ್ನಾಮಲ್ ತಮ್ಮ
ಆರೋಗ್ಯದ ಗುಟ್ಟೇ ಯೋಗವೆನ್ನುತ್ತಾರೆ. ಆಧುನಿಕ ಜೀವನ ಶೈಲಿಯ ಕೊಡುಗೆಯಿಂದ ೩೦-೩೫ರ
ಹರೆಯದಲ್ಲೇ ವೃದ್ಧಾಪ್ಯದ ಹೊಸ್ತಿಲಲ್ಲಿ ಕಾಲಿಟ್ಟು ಅವಧಿಗೆ ಮುನ್ನವೇ ಮುಪ್ಪಿನ ಭಾಗ್ಯ ಪಡೆದುಕೊ೦ಡು,
ಕುಂದಿದ ಜೀವನೋತ್ಸಾಹದ ಫಲವಾಗಿ, ಪ್ರೇಮದಿಂದ ಬದುಕುವದನ್ನು ಮರೆತು, ಜೀವನ ಒಂದು ಹೊರೆ ಎಂಬಂತೆ ಕಾಲ ಕಳೆಯುವ ಇಂದಿನ ಪೀಳಿಗೆಗೆ ಎಂದಿಗೂ ವೈದ್ಯರ ಕಾಣದ ನನ್ನಾಮಲ್ ಸ್ಪೂರ್ತಿಯಲ್ಲವೇ? 
೧೦೬ ವರ್ಷದ ಮಸ್ತಾನಮ್ಮಾ,
೯೭ರ ಪ್ರಾಯದ ನನ್ನಾಮಲ್ ಹಾಗೂ ೯೮ರ ಹರೆಯದ ತಾವೊ ಪೊರ್ಚೋನ್ ಲಿಂಚ್’ರ
ಕಥೆಗಳು ಕೇವಲ ವೃದ್ಧರ ಜೀವನ ಬದಲಿಸುವದಷ್ಟೆ ಅಲ್ಲದೆ, ಚಿಕ್ಕ ಪುಟ್ಟ ಅಸಫಲತೆಗಳಿಂದ
ಜೀವನದಲ್ಲಿ ಸೋತು ನೊಂದು, ಬೆಂದು, ಎದೆಗುಂದಿ, ಕೈ ಚಲ್ಲಿ ಆಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಇಂದಿನ ಯುವ ಪೀಳಿಗೆಗೂ ಪ್ರೇರಣೆಯಾಗಲಿವೆ. ಈ ಮೂವರು
ಮಹಿಳೆಯರ ಜೀವನದ ಅತ್ಯಂತ ಕುತೂಹಲಕಾರಿ ಸಂಗತಿ
ಅವರ ವಯಸ್ಸು, ಒಂದು ಕ್ಷಣ ನಾವು ಇವರ ವಯಸ್ಸನ್ನು ಮರೆತು ನಾವು ಇವರಂತೆ
ಬದುಕಬಲ್ಲೆವಾ? ಎಂದು ನಮ್ಮನ್ನು ನಾವೆ ಪ್ರಶ್ನಿಸಿಕೊಂಡರೆ ನಮ್ಮ
ಜೀವನದಲ್ಲಿ ಅಡುಗಿದ ಸತ್ಯದ ದರ್ಶನವಾಗುತ್ತದೆ. ಈ ತೇಜಸ್ವಿ ಮಹಿಳೆಯರ
ಆಹಾರ, ಯೋಗ ಮತ್ತು ಪ್ರೀತಿಯೇ ಮನೆ ಮಂದಿಗೆಲ್ಲ ಆದರ್ಶವಾಗಬೇಕು. ನಿರಾಸೆ
ಮತ್ತು ಉದಾಸೀನತೆಯನ್ನು ಬದಿಗಿರಿಸಿ ಉತ್ಸಾಹ ಮತ್ತು ಉಲ್ಲಾಸದಿಂದ ಬದುಕಿದರೆ ಪ್ರತಿ ಮನೆಯೂ
ದೇವಾಲಯವಾದಂತೆ. ಜೀವನದ ಎಲ್ಲ ಚಿಂತೆಗಳನ್ನು ರುಚಿಯ ಸವಿಯಲ್ಲಿ ತೂರಿ,
ಯೋಗ ಮತ್ತು ಪ್ರಾರ್ಥನೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು,
ನೃತ್ಯ ಮತ್ತು ಪ್ರೇಮದ ಏಣಿಯ ಮೆಟ್ಟಿಲಿನ ಮೇಲೆ ಕಾಲಿಟ್ಟು ಜೀವನದ ಉತ್ತುಂಗಕ್ಕೇರಿ ಸಾರ್ಥಕ ಬದುಕು ನಡೆಸುವ ಈ ಮಹಿಳೆಯರ ಬಾಳು
ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದೆಯಲ್ಲವೇ.....?


ಪ್ರಭುದ್ಧ ಲೇಖನ
ReplyDelete