ನಮ್ಮ ದೇಶದ ವಿರೋಧ ಪಕ್ಷಗಳೆಲ್ಲಾ ‘ನಮೋ’ಫೋಬಿಯಾದಿಂದ ಬಳಲುತ್ತಿದ್ದರೆ ದೇಶದ ನಗರಪ್ರದೇಶದ ಬಹುತೇಕ ಜನರು ‘ನೋಮೋ’ಫೋಬಿಯಾದಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ
ಯುವಜನತೆಯ ಜೀವ ಮೋಬೈಲನಲ್ಲಿಯೇ ಅಡಗಿದೆ ಎಂದರೆ ತಪ್ಪಾಗಲಾರದು. ಪರಿಣಿತರ ಪ್ರಕಾರ ಸ್ಮಾರ್ಟ್’ಫೋನ್ ಹಾಗೂ ಇಂಟರ್ನೆಟ್’ನ ಉಪಯೋಗದ ಶೇಕಡಾ 15ರಷ್ಟು ಮಾತ್ರ
ಅರ್ಥಪೂರ್ಣ ಅವಶ್ಯಕ ಕೆಲಸಕ್ಕಾಗಿರುತ್ತದೆ. ಶರೀರಕ್ಕೆ ಹೇಗೆ ಸಮತೋಲಿತ ಆಹಾರ ಅವಶ್ಯವೋ ಹಾಗೆ
ಮಾನಸಿಕ ನೆಮ್ಮದಿಗೆ ಡಿಜಿಟಲ್ ಡೈಟಿಂಗ್ ಅತ್ಯವಶ್ಯ. ಯಾವಾಗ ಇಂಟರ್ನೆಟ್ ಬಳಕೆಯಿಂದ ಸಾಮಾಜಿಕ, ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಹಾಳಾಗಿ ದೈಹಿಕ ಆಲಸ್ಯ, ಸ೦ಬಂಧಗಳಲ್ಲಿ
ಬಿರುಕು ಮುಂತಾದ ಸಮಸ್ಯೆಗಳು ಉಧ್ಬವಿಸಿದಲ್ಲಿ ಇಂಟರ್ನೆಟ್ ಬಳಕೆಯಿಂದ ವ್ಯಸನದತ್ತ
ವಾಲುತ್ತಿದ್ದೇವೆಂದರ್ಥ.
ಸಂಶೋಧನೆಯೊಂದರ ಪ್ರಕಾರ ಯಾರು ಬಿಡುವಿಲ್ಲದೆ,
ಸದಾ ತಮ್ಮ ಸ್ಮಾರ್ಟ್’ಫೋನ್ ನೋಡುತ್ತಾ, ಸ್ನೇಹಿತರೊಂದಿಗೆ ಹರಟುವಾಗಲೂ ಚಿತ್ತ ಎತ್ತಲೋ ಪಯಣಿಸಿ
ಮೊಬೈಲ್ ಸ್ಕ್ರೀನ್ ಮೇಲೆ ಪದೇ ಪದೇ ದೃಷ್ಟಿಹರಿಸಿದರೆ,ನಿದ್ರಿಸಿ ಹಾಯಾದ ಕನಸಿನ ಲೋಕದಲ್ಲಿ ತೇಲುವ ಸಮಯದಲ್ಲೂ ಮೊಬೈಲ್ ಫೋನ್
ಪಕ್ಕಕಿರಿಸಿಕೊಂಡು ಅನವಶ್ಯಕವಾಗಿ ಹೊತ್ತಿಲ್ಲದ
ಹೊತ್ತಿನಲ್ಲಿ ಮೊಬೈಲ್ ಮೇಲೆ ಕಣ್ಣಾಡಿಸಿದರೆ ಖಂಡಿತವಾಗಿಯೂ ಅಂಥವರು ಮೊಬೈಲ್ ಫೋನ್’ನ ವ್ಯಸನಕ್ಕೊಳಗಾಗಿದ್ದರ೦ತಲೇ ಅರ್ಥ. ಕಿವಿ ಸರಿಯಾಗಿ ಕೇಳದಿರುವುದು, ಕತ್ತು ಹಾಗೂ ಬೆರಳುಗಳ ನೋವು,ಅನಾವಶ್ಯಕ ಚಿಂತೆ/ಗೊಂದಲ/ಚಡಪಡಿಕೆ
ಮುಂತಾದ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳು ಮೊಬೈಲ್ ಮತ್ತು
ಅಂತರ್ಜಾಲದ ಮಿತಿಮೀರಿದ ಉಪಯೋಗದ ಕೊಡುಗೆ!
ಈ ರೀತಿಯ ವ್ಯಸನಕ್ಕೆ ತುತ್ತಾದವರ ಮಲಗುವ ಮುನ್ನದ ಕೊನೆಯ ಕೆಲಸ ಮತ್ತು ಮುಂಜಾನೆಯ
ಸುಪ್ರಭಾತ ಮೊಬೈಲ್ ಪರಿಶೀಲಿಸುವದು! ವಿಜ್ಞಾನಿಗಳು ಮತ್ತು ಮನೋವೈದ್ಯರು ಪ್ರಕಾರ ಇಂಥವರಿಗೆ ಕೆಲ ದಿನಗಳ
ಮಟ್ಟಿಗೆ ಡಿಜಿಟಲ್ ಉಪಕರಣಗಳಿಂದ ದೂರವಿರುವದು ಅನಿವಾರ್ಯ. ಯಾವಾಗಲೂ ಇಂಟರ್ನೆಟ್’ನಲ್ಲಿ
ಆನ್ ಲೈನ್ ಇರುವ ವ್ಯಸನಿಗಳಿಗೋಸ್ಕರ ವಿಶ್ವದ ಹಲವೆಡೆ ಇಂಟರ್ನೆಟ್ ನಶಾ ಮುಕ್ತಿ ಕೇಂದ್ರಗಳು
ತೆರೆದುಕೊಂಡಿವೆ. ಈ ಪ್ರಕ್ರಿಯೆಗೆ ಡಿಜಿಟಲ್ ಡಿಟಾಕ್ಸ್
ಎಂದು ಹೆಸರು. ಸಕಲ ಡಿಜಿಟಲ್ ಉಪಕರಣಗಳಿಂದ ದೂರವಿದ್ದು ವ್ಯಕ್ತಿ ತನ್ನೊಂದಿಗೆ ತಾನು ಕೆಲ
ಸಮಯ ಕಳೆಯುವ೦ತೆ ಮಾಡಿ ನೋಮೋ ಮತ್ತು ಫೋಮೊ
ಫೋಬಿಯಾಗೊಳಗಾದ ಜನರನ್ನು ಗುಣಮುಖರಾಗಿಸುವದು ಈ ಡಿಜಿಟಲ್ ಡಿಟಾಕ್ಸ್ ಕೇಂದ್ರಗಳ ಉದ್ದೇಶ. ನೋಮೊ-ಫೋಬಿಯ ಅ೦ದ್ರೆ ನೋ ಮೊಬೈಲ್ ಫೋಬಿಯಾ: ಮೊಬೈಲ್ ಫೋನ್ ಜೊತೆಗಿಲ್ಲವಾದಲ್ಲಿ ಹೆದರಿಕೆ ಹುಟ್ಟುವದು, ಏನೋ ಕಳೆದುಕೊಂಡಂತೆ ಭಾಸವಾಗುವದು, ಮೊಬೈಲ್’ನ ಬ್ಯಾಟರಿ ಖಾಲಿಯಾದಾಗ ಮನದ ತುಮುಲ ಹೆಚ್ಚುವದು, ಕ್ಷಣ ಕ್ಷಣಕ್ಕೂ
ಮೊಬೈಲ್’ನ
ಸಂದೇಶಗಳು ಮತ್ತು ನೋಟಿಫಿಕೇಶನ್’ಗಳನ್ನು ನೋಡುವದು, ಅಂತರ್ಜಾಲದ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾಗ
ಕಾರಣವಿಲ್ಲದೆ ರೇಗುವದು ನೋಮೋಫೋಬಿಯಾದ ಕೆಲ ಲಕ್ಷಣಗಳು. ಜಗತ್ತಿನಾದ್ಯಂತ ಬಹಳಷ್ಟು ಜನರು ನೋಮೋ-ಫೋಬಿಯಾದೊಂದಿಗೆ ಫೋಮೊ-ಫೋಬಿಯದಿಂದಲೂ ಬಳಲುತ್ತಿದ್ದರೆ. ಫೋಮೋ (FOMO)ದ ಅರ್ಥ ‘ಫೀಯರ್ ಆಫ್ ಮಿಸ್ಸಿಂಗ್
ಔಟ್’ ಅಂದ್ರೆ ಮೊಬೈಲ್ ಫೋನ್ ಹತ್ತಿರವಿಲ್ಲದ
ಕಾರಣ ಹೊರಜಗತ್ತಿನ ಆಗುಹೋಗುಗಳನ್ನು ಅರಿಯಲಸಾಧ್ಯವೆಂಬ ಗಾಬರಿ/ಹೆದರಿಕೆ/ಕೀಳರಿಮೆಯ ಪರಿಸ್ಥಿತಿ. ಚೀನಾದಲ್ಲಿ ಸುಮಾರು 2.5ಕೋಟಿ ಜನ ಇಂಟರ್ನೆಟ್’ನ ವ್ಯಸನಿಗಲಾಗಿದ್ದು,
ಇವರಲ್ಲಿ ಬಹುತೇಕರು ಪ್ರತಿ ದಿನ 17ಗಂಟೆಗೂ
ಹೆಚ್ಚು ಕಾಲ ಗುಂಪುಕಟ್ಟಿಕೊಂಡು ಇಂಟರ್ನೆಟ್ ಸಂಬಂಧಿ ಆಟಗಳನ್ನಾಡುತ್ತಾ ಅಂತರ್ಜಾಲದ ಗಂಭೀರ ವ್ಯಸನಿಗಳಾಗಿ ಬಳಲುತ್ತಿದ್ದಾರೆ. ಅಚ್ಚರಿಯೆಂದರೆ
ಆಟದಲ್ಲಿ ಸೋಲುವ ಭೀತಿಯಿಂದ ಆತ್ರಾಜಾಲಕ್ಕಂಟಿಕೊಂಡೆ ನೈಸರ್ಗಿಕ ಕರೆಯನ್ನು ಪೂರೈಸಲು ಡೈಪರಗಳನ್ನು
ಉಪಯೋಗಿಸುತ್ತಾರೆ! ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಕ್ಯಾಂಪ್ ಗ್ರೌಂಡೆಡ್ ಡಿಜಿಟಲ್ ಡಿಟಾಕ್ಸ್ ಕೇಂದ್ರದಲ್ಲಿ ಜನರ ಮನ ಕಿ ಬಾತ್’ನ್ನು
ಫೇಸ್’ಬುಕ್ ಗೋಡೆಯ ಬದಲು ಇದಕ್ಕೆಂದೆ ಮೀಸಲಿಟ್ಟ ಅಸಲಿ ಗೋಡೆಯ ಮೇಲೆ ಬರೆಸಲಾಗುತ್ತದೆ.
ನಮ್ಮ ದೇಶದಲ್ಲಿ ಸ್ಮಾರ್ಟ್’ಫೋನ್
ಉಪಯೋಗಿಸುವ 50ಪ್ರತಿಶತ ಜನ ಸಂಗೀತಕ್ಕೆ ಸಂಬಂಧಿಸಿದ ವೀಡಿಯೋ ನೋಡುವ/ಕೇಳುವ ಖಯಾಲಿಯವರಾದರೆ, ವಾಟ್ಸ್’ಆಪ್ ಬಳಸುವರ ಸಂಖ್ಯೆ ಇದಕ್ಕಿಂತ ಮಿಗಿಲು. ನಂತರದ
ಸ್ಥಾನ ಗೂಗಲ್ ಸರ್ಚ್, ಯೂಟ್ಯೂಬ್ ಹಾಗೂ ಈ-ಕಾಮರ್ಸ್ ಜಾಲತಾಣಗಳದು.
ಒಂದು ಅಂದಾಜಿನ ಪ್ರಕಾರ 2021ರ ಹೊತ್ತಿಗೆ ಭಾರತದಲ್ಲಿ ಸ್ಮಾರ್ಟ್’ಫೋನ್
ಬಳಕೆದಾರರ ಸಂಖ್ಯೆ ಜನಸಂಖ್ಯೆಯ 58 ಪ್ರತಿಶತಕ್ಕೇರಲಿದೆ, ಅ೦ದರೆ
75ಕೋಟಿ ಜನ ಸ್ಮಾರ್ಟ್’ಫೋನ್’ನ
ದಾಸರಾಗಲಿದ್ದಾರೆ! ಟೈಮ್ ಮ್ಯಾಗ್ಝಿನ್ ವರದಿಯಂತೆ
ವಿಶ್ವದ 68 ಪ್ರತಿಶತ ಜನರು ನಿದ್ರಿಸುವಾಗ ಡಿಜಿಟಲ್ ಉಪಕರಣಗಳನ್ನು ಪಕ್ಕದಲ್ಲೇ ಅಥವಾ
ದಿಂಬಿನಡಿಯಲ್ಲೇ ಇಟ್ಟುಕೊಳ್ಳುತ್ತಾರೆ ಹಾಗೂ ಶೇಕಡಾ 20ರಷ್ಟು ಜನರು ಕ್ಷಣ ಕ್ಷಣಕ್ಕೂ ಮೊಬೈಲ್’ನ ನೋಟಿಫಿಕೇಶನ್ ಪರಿಶೀಲಿಸುತ್ತಾರೆ! ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್’ನ ವರದಿಯಂತೆ ದಿನದ 24ಗಂಟೆಗಳ ಕಾಲ ಫೇಸ್’ಬುಕ್’ನಲ್ಲಿ ಮುಳುಗಿರುವರು ತಮ್ಮ ನಿಜಜೀವನದಲ್ಲಿ ಹತಾಶರಾಗಿ
ನಿರಾಶರಾಗಿರುತ್ತಾರೆ! ಇದೆ ರೀತಿ ಅಚಾನಕಾಗಿ ಮೊಬೈಲ್ ಫೋನ್ ರಿಂಗಾದಂತೆ ಭಾಸವಾಗುವದು, ರಿಂಗ್ ಟೋನ್ ಕಿವಿಯಲ್ಲಿ ಗು೦ಯಗುಟ್ಟಿದ೦ತಾದರೆ ಫ್ಯಾ೦ಟಮ್ ಫೋನ್ ಸಿಡ್ರೋಮ್ ಅರ್ಥಾತ್
ರಿಂಗ್ಸೈಟಿಯ ಸಂಕೇತ.
ದಿನನಿತ್ಯದ ಜಂಜಾಟಗಳಿಂದ ಬೇಸತ್ತು ಕುಟುಂಬದೊಂದಿಗೆ
ಹಾಯಾಗಿ ರಜೆ ಕಳೆಯಲು ಸುಂದರ ಪ್ರದೇಶಯೊಂದಕ್ಕೆ ಪ್ರಯಾಣಿಸುವ ಯೋಜನೆ ರೂಪಿಸುವಾಗ, ಇಂಟರ್ನೆಟ್/ವೈಫೈ ಸೌಲಭ್ಯಗಳಿಲ್ಲದ ಹೊಟೇಲ್’ಗಳನ್ನೇ ಹುಡುಕಿ
ಮನಸೇಚ್ಛೆಯಾಗಿ ಶಾಂತತೆಯನ್ನು/ಏಕಾಂತವನ್ನು ಆನಂದಿಸುವದು ಒಳಿತು. ಹೊಟೇಲ್ ಮೊಬೈಲ್ ನೆಟ್’ವರ್ಕ್
ಇಲ್ಲದಿರುವ ಜಾಗದಲ್ಲಿದ್ದರೆ ಇನ್ನೂ ಸುಖ. ರಜಾಕಾಲದ ಪರಮಾನಂದಕ್ಕೆ ಭಂಗ ತರುವ ಲ್ಯಾಪ್’ಟಾಪ್,ಟ್ಯಾಬ್,ಸ್ಮಾರ್ಟ್ ವಾಚ್’ನಂಥ ಉಪಕರಣಗಳನ್ನು ಜೊತೆಗೆ ಒಯ್ಯದಿರುವದರಿಂದ
ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿಯೂ ಖಂಡಿತವಾಗಿ ದೊರೆಯುವದು. ಇಂಟರ್ನೆಟ್’ಮುಕ್ತ ರಜೆಯಿಂದ
ಜೀವನದ ತಾಜಾತನ ಮರಳಿ ಉಲ್ಲಾಸದ ಚಿಲುಮೆ ಚಿಮ್ಮಿ,ಸಂವೇದನಶೀಲ
ವ್ಯಕ್ತಿಯಾಗಿ ಹೊರಹೊಮ್ಮುವದರಲ್ಲಿ ಸಂಶಯವೇ ಇಲ್ಲ.
No comments:
Post a Comment
Note: only a member of this blog may post a comment.